ಚೇಂಬರ್ಸ್, ರಾಬರ್ಟ್
1802-1871. ಸ್ಕಾಟ್ಲೆಂಡಿನ ಬರೆಹಗಾರ ಮತ್ತು ಪ್ರಕಾಶಕ. ವಿಲಿಯಂ ಚೇಂಬರ್ಸ್‍ನ ಸಹೋದರ. ಈತ ತನ್ನ ಜೀವಿತದ ಬಹುಭಾಗವನ್ನು ವಾಣಿಜೋದ್ಯಮದಲ್ಲಿ ಕಳೆದನೆಂದು ಹೇಳಲಾಗಿದೆ. ಆಗಿನ ಪ್ರಮುಖ ಬರೆಹಗಾರರೆನಿಸಿದ ವಾಲ್ಟರ್ ಸ್ಕಾಟ್ ಮುಂತಾದವರ ಗೆಳೆಯನಾಗಿದ್ದ. ಈತನ ಮುಖ್ಯ ಕೃತಿಯಾದ ಟ್ರೆಡಿಷನ್ಸ್ ಆಫ್ ಎಡಿನ್‍ಬರೋವನ್ನು (1824) ಸ್ಕಾಟ್ ತುಂಬ ಪ್ರಶಂಸಿಸಿದ್ದಾನೆ. ಇದಲ್ಲದೆ ಚೇಂಬರ್ಸ್ ವೈಯಕ್ತಿಕ ಸಂಶೋಧನೆಯನ್ನು ಆಧರಿಸಿ ಸಾಹಿತ್ಯ, ಇತಿಹಾಸ ಮತ್ತು ಭೂಗರ್ಭ ಶಾಸ್ತ್ರಗಳ ಮೇಲೆ ಗ್ರಂಥಗಳನ್ನು ರಚಿಸಿದ್ದಾನೆ. ಅನಾಮಧೇಯವಾಗಿ ಮೊದಲು ಪ್ರಕಟಗೊಂಡ ಈತನ ವೆಸ್ಟಿಜಸ್ ಆಫ್ ದಿ ನ್ಯಾಚುರಲ್ ಹಿಸ್ಟ್ರಿ ಆಫ್ ಕ್ರಿಯೇಷನ್ (1844) ಎಂಬ ಗ್ರಂಥ ವಿವಾದಕ್ಕೆ ಒಳಗಾಗಿದ್ದರೂ ಡಾರ್ವಿನ್ನನ ವಿಕಾಸವಾದವನ್ನು ಸ್ವೀಕರಿಸಲು ಒಳ್ಳೆಯ ಅಡಿಪಾಯ ಹಾಕಿಕೊಟ್ಟ ಕೃತಿ ಎಂದು ಪರಿಗಣಿತವಾಗಿದೆ. 1832ರಲ್ಲಿ ಚೇಂಬರ್ಸ್ ಎಡಿನ್‍ಬರೊ ಜರ್ನಲ್‍ನ್ನು ತನ್ನ ಸಹೋದರ ವಿಲಿಯಂನೊಂದಿಗೆ ಆರಂಭಿಸಿದುದಲ್ಲದೆ ಚೇಂಬರ್ಸ್ ವಿಶ್ವಕೋಶದ ಸ್ಥಾಪನೆಗೂ ಕಾರಣನಾದ,
(ಎನ್.ಎಸ್.ಆರ್.ಎ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ